ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಡಿಸೆಂಬರ್ 2021
ಘಟನೆ 1 : ಹೆರಿಗೆ ನೋವಿನಿಂದ ಬಳಲಿಕೆ
ಸಂಜೆ 6 ಗಂಟೆಗೆ ಚದರವಳ್ಳಿ ಗ್ರಾಮದ ಚೈತ್ರಾ ಅವರಿಗೆ ಹೆರಿಗೆ ನೋವು ಶುರುವಾಯ್ತು. ಕುಟುಂಬದವರು 108 ಆಂಬುಲೆನ್ಸ್’ಗೆ ಕರೆ ಮಾಡಿದರು. ರಾತ್ರಿಯಾದರೂ ಆಂಬುಲೆನ್ಸ್ ಸುಳಿವಿಲ್ಲ. ಹೆರಿಗೆ ನೋವಿನಿಂದ ನರಳುತ್ತಿದ್ದ ಚೈತ್ರಾ ಅವರನ್ನು ಕಾರೊಂದರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ರಾತ್ರಿ ಹೆರಿಗೆಯಾಯ್ತು. ಹೆಚ್ಚಿನ ಚಿಕಿತ್ಸೆಗೆ ನಡುರಾತ್ರಿ ಹೊತ್ತಿಗೆ ಸಾಗರದ ಆಸ್ಪತ್ರೆಗೆ ಕಳುಹಿಸಲಾಯಿತು. ಬೆಳಗಾಗುವುದರಲ್ಲಿ ಮಗು ಸಾವನ್ನಪ್ಪಿದೆ.
ಘಟನೆ 2 : ಅಪಘಾತದಲ್ಲಿ ತಲೆಗೆ ಗಾಯ
ತುಮರಿ ಸಮೀಪ ರಾತ್ರಿ ಬೈಕ್ ಸವಾರರಿಬ್ಬರು ದನವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದರು. ಸವಾರರೊಬ್ಬರ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಉಂಟಾಗುತಿತ್ತು. ನೋವು ತಾಳಲಾರದೆ ಒದ್ದಾಡುತ್ತಿದ್ದರು. ಕೂಡಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತು. ಅದೆ ಹೊತ್ತಿಗೆ ಹೆರಿಗೆ ನಡೆಯುತಿತ್ತು.
ಇವರೆಡು ಬುಧವಾರ ರಾತ್ರಿ ತುಮರಿ ಭಾಗದಲ್ಲಿ ಒಂದೇ ಸಮಯಕ್ಕೆ ಸಂಭವಿಸಿದ ಮನ ಕಲಕುವ ಘಟನೆಗಳು. 108 ಆಂಬುಲೆನ್ಸ್ ಇದ್ದಿದ್ದರೆ ಚೈತ್ರಾ ಅವರ ಹೆಣ್ಣು ಮಗು ಅವರ ಮಡಿಲಲ್ಲಿರುತ್ತಿತ್ತು. ಕುಟುಂಬದವರು ಸಂತಸದಲ್ಲಿರುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡವರಿಗೆ ಕೂಡಲೆ ಪ್ರಾಥಮಿಕ ಚಿಕಿತ್ಸೆ ಲಭಿಸಿ, ನೋವು, ನರಳಾಟ ಕಡಿಮೆಯಾಗುತ್ತಿತ್ತು.
ಸಂಜೆಯಾಗುತ್ತಿದ್ದಂತೆ ಎಲ್ಲವೂ ಬದಲು
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೂ ತುಮರಿ, ಸಿಗಂದರೂ ಭಾಗದಲ್ಲಿ ನೂರಾರು ವಾಹನಗಳು, ಜನ ಜಂಗುಳಿ ಇರುತ್ತದೆ. ಆದರೆ ಸಂಜೆಯಾಗುತ್ತಿದ್ದಂತೆ ಈ ಪ್ರದೇಶ ಕರಾಳ ರೂಪ ಪಡೆಯುತ್ತದೆ. ಜನರ ಜೀವಕ್ಕಿಲ್ಲಿ ಬೆಲೆಯೇ ಇಲ್ಲವಾಗುತ್ತದೆ. ಅದಕ್ಕೆ ಉದಾಹರಣೆ ಕಳೆದ ರಾತ್ರಿ ನಡೆದ ಎರಡು ಘಟನೆಗಳು.
ಆರೋಗ್ಯ ಸಮಸ್ಯೆ, ಅಪಘಾತ ಸಂಭವಿಸಿದರೆ ಪ್ರಾಥಮಿಕ ಚಿಕಿತ್ಸೆಗಾಗಿ ತುಮರಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಸಂಜೆಯಾಗುತ್ತಿದ್ದಂತೆ ಡ್ಯೂಟಿ ಡಾಕ್ಟರ್ ಮನೆಗೆ ತೆರಳುತ್ತಾರೆ. ಇಬ್ಬರು ನರ್ಸಿಂಗ್ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ. ತುರ್ತು ಸಂದರ್ಭ ಈ ಸಿಬ್ಬಂದಿಯೇ ಎಲ್ಲಾ ಚಿಕಿತ್ಸೆ ನೀಡಬೇಕಾಗುತ್ತದೆ.
ಲಾಂಚ್ ಇಲ್ಲದಿದ್ದರೆ ಹೊರಜಗತ್ತು ದೂರ
ಸಿಗಂದೂರು, ಶರಾವತಿ ಹಿನ್ನೀರಿನ ಮೇಲೆ ತೇಲುವ ಲಾಂಚ್ ಪ್ರವಾಸಿಗರ ಪಾಲಿಗೆ ಸ್ವರ್ಗದ ಅನುಭವ ನೀಡುತ್ತದೆ. ಆದರೆ ಸಂಜೆ 6 ಗಂಟೆ ಬಳಿಕ ಲಾಂಚ್ ಸೇವೆ ಸ್ಥಗಿತವಾಗುತ್ತದೆ. ಆ ಬಳಿಕ ಇಲ್ಲಿನ ನಿವಾಸಿಗಳಿಗೆ ಹೊರ ಜಗತ್ತು ಬಹಳ ದೂರವಾಗಿಬಿಡುತ್ತದೆ. ಸಾಗರದ ಆಸ್ಪತ್ರೆಗೆ ತೆರಳಲು 120 ಕಿ.ಮೀ ಸುತ್ತಿಕೊಂಡು ಬರಬೇಕು. ಗರ್ಭಿಣಿಯರು, ಅಪಘಾತದಲ್ಲಿ ಗಾಯಗೊಂಡವರು, ಕಾಯಿಲೆಗೆ ತುತ್ತಾದವರು ಖಾಸಗಿ ವಾಹನಗಳಲ್ಲಿ 120 ಕಿ.ಮೀ ಸಂಚರಿಸುವುದು ಸುಲಭದ ಮಾತಲ್ಲ. ಇದೆ ಕಾರಣಕ್ಕೆ ಇಲ್ಲಿಗೆ ಆಂಬುಲೆನ್ಸ್ ಅವಶ್ಯತೆ ಇದೆ.
ಹೋರಾಟ ಮಾಡಿ ಆಂಬುಲೆನ್ಸ್ ಪಡೆದಿದ್ದರು
ತುಮರಿ ಸುತ್ತಮುತ್ತ ಸುಮಾರು 20 ಸಾವಿರ ಜನ ಸಂಖ್ಯೆ ಇದೆ. ಇಷ್ಟೂ ಜನಕ್ಕೆ ಇದ್ದದ್ದು ಒಂದೇ 108 ಆಂಬುಲೆನ್ಸ್. 2014ಕ್ಕೂ ಮೊದಲು ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಂಬುಲೆನ್ಸ್ ಇರಲಿಲ್ಲ. ತುರ್ತು ಸಂದರ್ಭ ಕಾರ್ಗಲ್’ನಿಂದ ಆಂಬುಲೆನ್ಸ್ ಬರಬೇಕಿತ್ತು. ಜನರು ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿ ಒಂದು ಆಂಬುಲೆನ್ಸ್ ಮಂಜೂರು ಮಾಡಿಸಿಕೊಂಡಿದ್ದರು. ಆದರೆ ಅದೂ ಈಗ ಕಾಣೆಯಾಗಿದೆ.
108 ಆಂಬುಲೆನ್ಸ್’ಗೆ ನೂರೆಂಟು ವಿಘ್ನ
ಕಳೆದೊಂದು ತಿಂಗಳಿಂದ ತುಮರಿಯಿಂದ 108 ಆಂಬುಲೆನ್ಸ್ ಕಣ್ಮರೆಯಾಗಿದೆ. ರಿಪೇರಿಯ ನೆಪವೊಡ್ಡಿ ತುಮರಿಯಿಂದ ತೆರಳಿದ ಆಂಬುಲೆನ್ಸ್ ಮತ್ತೆ ಹಿಂತಿರುಗಿಲ್ಲ. ಬದಲಿ ವ್ಯವಸ್ಥೆ ಮಾಡಿ ಎಂದು ಜನರ ಬೇಡಿಕೊಂಡರೂ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ತುರ್ತಾಗಿ ಅಂಬುಲೆನ್ಸ್ ಬೇಕು ಎಂದು 108ಕ್ಕೆ ಡಯಲ್ ಮಾಡಿದರೆ ಕಾರ್ಗಲ್’ನಿಂದ ಆಂಬುಲೆನ್ಸ್ ಬರಬೇಕು. ಅದು ಇಲ್ಲದಿದ್ದರೆ ಈ ಭಾಗದ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸಿಕೊಂಡು ಸಾಗರ ತಲುಪಬೇಕು. ಇದೆ ಕಾರಣಕ್ಕೆ ಕಳೆದ ರಾತ್ರಿ ಹಸುಗೂಸು ಕಣ್ಣು ಬಿಡುವ ಮೊದಲೆ ಇಹಲೋಕ ಯಾತ್ರ ಮುಗಿಸಿದೆ.
ಆಂಬುಲೆನ್ಸ್’ಗಾಗಿ ಮತ್ತೆ ಹೋರಾಟದ ಎಚ್ಚರಿಕೆ
ಚದುರವಳ್ಳಿ ಚೈತ್ರಾ ಅವರಿಗೆ ಹೆರಿಗೆ ಮಾಡಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಾರಿನಲ್ಲಿ ಸಾಗರ ಆಸ್ಪತ್ರೆಗೆ ಕಳುಹಿಸಲಾಯಿತು. ರಾತ್ರಿ 10 ಗಂಟೆ ಹೊತ್ತಿಗೆ ಲಾಂಚ್ ಸಿಬ್ಬಂದಿ ಲಾಂಚ್ ಓಡಿಸಿ ಮಗು, ಬಾಣಂತಿಯನ್ನು ಮತ್ತೊಂದು ದಡಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಒಂದು ವೇಳೆ ಆಂಬುಲೆನ್ಸ್ ಇದ್ದಿದ್ದರೆ ಇವತ್ತು ಚಿತ್ರಣ ಬೇರೆಯದ್ದೆ ಇರುತ್ತಿತ್ತು. ಕಳೆದೊಂದು ತಿಂಗಳಿಂದ ಆಂಬುಲೆನ್ಸ್ ಇಲ್ಲದಿರುವುದರಿಂದ ಹಲವರು ಸಮಸ್ಯೆ ಅನುಭವಿಸಿದ್ದಾರೆ. ಇನ್ನಷ್ಟು ಸಮಸ್ಯೆಗೂ ಮೊದಲು ಆಂಬುಲೆನ್ಸ್ ಒದಗಿಸಬೇಕು ಎಂದು ಜನರು ಪಟ್ಟು ಹಿಡಿದಿದ್ದಾರೆ.
‘ಆಂಬುಲೆನ್ಸ್’ಗಾಗಿ ಶುಕ್ರವಾರ ತುಮರಿ ಪ್ರಾಥಮಿಕ ಆರೋಗ್ಯದ ಕೇಂದ್ರದ ಮುಂದೆ ಹೋರಾಟ ಮಾಡುತ್ತೇವೆ. ಇಷ್ಟೆಲ್ಲ ಆದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ’ ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಅವರು ಬೇಸರ ವ್ಯಕ್ತಪಡಿಸಿದ್ದ್ದಾರೆ. ಶರಾವತಿ ಹಿನ್ನೀರಿನ ದ್ವೀಪದ ಜನರ ಬವಣೆಗೆ ಆದಷ್ಟು ಬೇಗ ಮುಕ್ತಿ ಸಿಗಬೇಕಿದೆ. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ 108 ಆಂಬುಲೆನ್ಸ್’ಗೆ ಪರ್ಯಾಯ ವ್ಯವಸ್ಥೆ ಮಾಡುವತ್ತ ಯೋಚಿಸಬೇಕಿದೆ.
ಸಿಗಂದೂರು ದೇವಸ್ಥಾನ, ಇಲ್ಲಿಯ ಪ್ರಕೃತಿ ಸೊಬಗು, ಶರಾವತಿ ಹಿನ್ನೀರು, ಅದರ ಮೇಲೆ ತೇಲುವ ಲಾಂಚ್’ಗಳು ಪ್ರವಾಸಿಗರ ಪಾಲಿಗೆ ಸ್ವರ್ಗದ ಅನುಭವ ನೀಡುತ್ತದೆ. ಆದರೆ ಇಲ್ಲಿನ ವಾಸಿಗಳಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸದೆ ಸರ್ಕಾರ ಈ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422