ಶಿವಮೊಗ್ಗ: ಜಮೀನಿಗೆ ಅನಧಿಕೃತವಾಗಿ ವಿದ್ಯುತ್ ಬೇಲಿ (electric fence) ಅಳವಡಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣರಾಗಿದ್ದ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕೊನೆಹೊಸೂರು ಗ್ರಾಮದ ಲಕ್ಷ್ಮಣಪ್ಪ (48) ಮತ್ತು ಲಿಂಗಪ್ಪ (43) ಶಿಕ್ಷೆಗೆ ಗುರಿಯಾದವರು. ಇವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹11,000 ದಂಡ ವಿಧಿಸಿ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಆದೇಶಿಸಿದ್ದಾರೆ.

ಆಗಿದ್ದೇನು?
2021ರ ಸೆಪ್ಟೆಂಬರ್ 25ರ ರಾತ್ರಿ ಗಾಮಪ್ಪ ಎಂಬುವವರು ಬಹಿರ್ದೆಸೆಗೆ ತೆರಳಿದ್ದರು. ಈ ವೇಳೆ ಜಮೀನಿನ ತಂತಿ ಬೇಲಿಯನ್ನು ದಾಟುವಾಗ ಹರಿದ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಆರೋಪಿಗಳು ಬೋರ್‌ವೆಲ್‌ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು, ಅದನ್ನು ಅನುಮತಿಯಿಲ್ಲದೆ ತಂತಿ ಬೇಲಿಗೆ ಹರಿಸಿದ್ದರು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶಾಂತರಾಜ್ ಅವರು ವಾದ ಮಂಡಿಸಿದ್ದರು.

ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?







