ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 MARCH 2023
THIRTHAHALLI : ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ (Congress List) ತೀರ್ಥಹಳ್ಳಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸದಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಟಿಕೆಟ್ ವಿಚಾರ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿದ್ದ ಗೊಂದಲ ನಿವಾರಣೆಯಾಗಿದೆ. ಇನ್ನೇನಿದ್ದರು ಪಟ್ಟಿ ಪ್ರಕಟವಾಗುವುದೊಂದೆ (Congress List) ಬಾಕಿ ಎಂದ ಹೇಳಲಾಗಿತ್ತು. ಆದರೆ ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿಯ ಹೆಸರು ಕಾಣದಿರುವುದು ಕುತೂಹಲ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.
ಒಂದಾಗಿದ್ದೇವೆ ಎಂದು ಬಿಂಬಿಸಿದ್ದರು
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥ ಗೌಡ ಅವರ ನಡುವೆ ಭಿನ್ನಾಭಿಪ್ರಾಯ ಬಹಿರಂಗ ಸತ್ಯ. ಇಬ್ಬರು ನಾಯಕರು ಪ್ರತ್ಯೇಕವಾಗಿ ಪ್ರಚಾರ, ಹೋರಾಟ, ಪಾದಯಾತ್ರೆಗಳನ್ನು ನಡೆಸುತ್ತಿದ್ದರು. ಈಚೆಗೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಬ್ಬರನ್ನು ಒಂದುಗೂಡಿಸಿದ್ದರು. ಅಲ್ಲದೆ, ‘ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥಗೌಡ ಇಬ್ಬರನ್ನೂ ನಾನು ವಿಧಾನಸೌಧದಲ್ಲಿ ನೋಡಬೇಕು ಅಂದುಕೊಂಡಿದ್ದೇನೆ’ ಎಂದು ಹೇಳಿಕೆ ನೀಡಿದ್ದರು.
ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಂತೆ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥಗೌಡ ಅವರ ಪೈಕಿ, ಒಬ್ಬರು ವಿಧಾನಸಭೆಗೆ ಪ್ರವೇಶಿಸುತ್ತಾರೆ. ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರಾಗಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿತ್ತು. ಆ ಬಳಿಕ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಮಂಜುನಾಥಗೌಡ ಅವರು ಜೊತೆ ಜೊತೆಗೆ ಕಾಣಿಸಿಕೊಂಡರು, ದೇಗುಲ, ಪೂಜೆಗಳಲ್ಲಿ ಭಾಗಿಯಾಗಿದ್ದರು.
ಪಟ್ಟಿಯಿಂದ ತೀರ್ಥಹಳ್ಳಿಯಲ್ಲಿ ಅಚ್ಚರಿ
ಗೊಂದಲವಿಲ್ಲದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ತೀರ್ಥಹಳ್ಳಿ ಕ್ಷೇತ್ರದಲ್ಲಿಯು ಗೊಂದಲ ನಿವಾರಣೆ ಆಗಿರುವುದರಿಂದ ಮೊದಲ ಪಟ್ಟಿಯಲ್ಲೇ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗುವ ನಿರೀಕ್ಷೆ ಕಾರ್ಯಕರ್ತರಲ್ಲಿತ್ತು. ಆದರೆ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ನಿರಾಸೆ ಮತ್ತು ಅಸಮಾಧಾನ ಮೂಡಿದೆ.
ಇದನ್ನೂ ಓದಿ – ಕಾಂಗ್ರೆಸ್ ಮೊದಲ ಪಟ್ಟಿ, ಶಿವಮೊಗ್ಗ ಜಿಲ್ಲೆಯ 3 ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟ, 4 ಕ್ಷೇತ್ರದಲ್ಲಿ ಇನ್ನೂ ಸಸ್ಪೆನ್ಸ್
ಇತ್ತ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ದೂರವಾಣಿ ಮೂಲಕ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ‘ಕಾಂಗ್ರೆಸ್ ಸಿದ್ಧಾಂತ, ಜಾತ್ಯತೀತ ನಿಲುವಿನ ಬಗ್ಗೆ ಅಪಾರ ನಂಬಿಕೆ ಇದೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಮುದಾಯವನ್ನು ಒಟ್ಟಿಗೆ ಕೊಂಡೊಯ್ಯುತ್ತಿದೆ. ಕಾರ್ಯಕರ್ತರು ಆತುರ ಬೇಡ ಸಮಾಧಾನದಿಂದ ಇರಿ ಎಂದಷ್ಟೆ ಹೇಳಿದ್ದಾರೆ. ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗುವ ನಿರೀಕ್ಷೆ ಇತ್ತು. ಮುಂದಿನ ಪಟ್ಟಿಯಲ್ಲಿ ಬರಬಹುದು. ಜನರೊಂದಿಗೆ ಇದ್ದು ರಾಜಕಾರಣ ಮಾಡಿದ್ದೇನೆ. ಮುಂದೆಯು ಜನರೊಂದಿಗೆ ಇರುತ್ತೇನೆ’ ಎಂದು ತಿಳಿಸಿದರು.
ಮೊದಲ ಪಟ್ಟಿಯಿಂದ ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆಯ. ಹೆಸರು ಪ್ರಕಟವಾಗದಿದ್ದರೆ ಆಕಾಂಕ್ಷಿಗಳ ಮುಂದಿನ ನಿರ್ಧಾರವೇನು ಎಂಬುದರ ಕುರಿತು ಚರ್ಚೆಗಳು ಗರಿಗೆದರಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422