ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜೂನ್ 2021
ನಟ ಸಂಚಾರಿ ವಿಜಯ್‍ಗೆ ಶಿವಮೊಗ್ಗ ಜಿಲ್ಲೆಯ ಜೊತೆಗೆ ಉತ್ತಮ ನಂಟಿತ್ತು. ಕವಿಶೈಲ ವಿಜಯ್ ನೆಚ್ಚಿನ ತಾಣಗಳಲ್ಲೊಂದು. ಶಿವಮೊಗ್ಗದ ಹೊಟೇಲ್ ಒಂದರ ತಿಂಡಿ ಅಚ್ಚುಮೆಚ್ಚು. ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಸಂಚಾರಿ ವಿಜಯ್‍ಗೆ ಮೊದಲ ನಾಗರಿಕ ಸನ್ಮಾನವಾಗಿದ್ದು ಭದ್ರಾವತಿಯಲ್ಲಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಂಚಾರಿ ವಿಜಯ್ ಅವರಿಗೆ ರಾಜ್ಯದ ವಿವಿಧೆಡೆ ಗೆಳೆಯರ ಬಳಗವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಆಪ್ತರ ಪೈಕಿ ಒಬ್ಬರು ಶಂಕರ್ ಮಿತ್ರ. ಸಂಚಾರಿ ವಿಜಯ್ ಅವರು ಶಿವಮೊಗ್ಗಕ್ಕೆ ಬಂದಾಗಲೆಲ್ಲ ಇವರನ್ನು ಭೇಟಿಯಾಗುತ್ತಿದ್ದರು. ಒಟ್ಟಿಗೆ ಸುತ್ತಾಡುತ್ತಿದ್ದರು.
ಮಲೆನಾಡು ಊಟ, ತಿಂಡಿ ಬಲು ಇಷ್ಟ
ಸಂಚಾರಿ ವಿಜಯ್ ಅವರಿಗೆ ಮಲೆನಾಡಿನ ಊಟ, ತಿಂಡಿ ಬಹಳ ಇಷ್ಟ ಅಂತಾ ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ನೀರ್ ದೋಸೆ, ಚಟ್ನಿ ತುಂಬಾ ಪ್ರೀತಿ. ಮೀನಾಕ್ಷಿ ಭವನ ಹೊಟೇಲ್‍ನ ದೋಸೆ, ಮೊಸರು ಅವಲಕ್ಕಿ ಇಷ್ಟಪಡುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲ ನೆನಪು ಮಾಡಿಕೊಂಡು ಅಲ್ಲಿಗೆ ಹೋಗುತ್ತಿದ್ದರು ಅಂತಾರೆ ಶಂಕರ್. ಇನ್ನು, ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಫುಟ್‍ಪಾತ್ ಮೇಲೆ ಗಾಡಿಯಲ್ಲಿ ಮಾಡುವ ಪಡ್ಡು ಇಷ್ಟಪಡುತ್ತಿದ್ದರು. ಎರಡು ಪ್ಲೇಟ್ ಪಡ್ಡು ತಿಂದರಷ್ಟೆ ಅವರಿಗೆ ಸಮಾಧಾನವಾಗುತ್ತಿತ್ತು.
ಮೊದಲ ನಾಗರಿಕ ಸನ್ಮಾನ
ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಾಗ ಸಂಚಾರಿ ವಿಜಯ್ ಅವರಿಗೆ ಮೊಟ್ಟಮೊದಲು ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಇಲ್ಲಿನ ಎಂಪಿಎಂ ರಂಗಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ.ಕೆ.ಸಂಗಮೇಶ್ವರ್ ಮತ್ತು ಅಪ್ಪಾಜಿಗೌಡರ ಉಪಸ್ಥಿತಿಯಲ್ಲಿ ಸನ್ಮಾನ ಮಾಡಲಾಯಿತು.
ಕುಪ್ಪಳಿ, ಕವಿಶೈಲ, ಮಂಡಗದ್ದೆ
ನಟ ಸಂಚಾರಿ ವಿಜಯ್ ಅವರು ಅವಕಾಶ ಸಿಕ್ಕಾಗಲೆಲ್ಲ ಕುಪ್ಪಳಿಗೆ ಭೇಟಿ ನೀಡುತ್ತಿದ್ದರು. ಕವಿಶೈಲವನ್ನು ತುಂಬಾ ಇಷ್ಟಪಡುತ್ತಿದ್ದರು ಅನ್ನುತ್ತಾರೆ ಶಂಕರ್ ಮಿತ್ರ. ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣ ತೇಜಸ್ವಿ ಅವರ ಸಮಾಧಿ ಬಳಿಗೆ ಹೋಗಿ ನಮಸ್ಕರಿಸಿ ಮೌನಕ್ಕೆ ಶರಣಾಗುತ್ತಿದ್ದರು. ಇದಿಷ್ಟೆ ಅಲ್ಲ, ಮಂಡಗದ್ದೆ, ಗಾಜನೂರಿಗೆ ಒಮ್ಮೆ ಹೋಗಿ ಪ್ರಕೃತಿ ಸೊಬಗಿನ ಜೊತೆ ಸಮಯ ಕಳೆಯಬೇಕು ಎಂದು ಹೇಳಿದ್ದರಂತೆ. ಸಿಗಂದೂರು ದೇವಸ್ಥಾನ, ಶರಾವತಿ ಹಿನ್ನೀರಿನ ಲಾಂಚ್‍ನಲ್ಲಿನ ಸಂಚಾರ ಬಲು ಅಚ್ಚುಮೆಚ್ಚು. ನಾತಿಚರಾಮಿ ಸಿನಿಮಾ ತಂಡದ ಜೊತೆ ಒಮ್ಮೆ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು. ನಟಿ ಶೃತಿ ಹರಿಹರನ್ ಸೇರಿದಂತೆ ಹಲವರು ಈ ತಂಡದಲ್ಲಿದ್ದರು.
ಸಿಟಿ ಸೆಂಟರ್’ಗೆ ಕೊನೆ ಭೇಟಿ
ನಟ ಸಂಚಾರಿ ವಿಜಯ್ ಅವರು ‘ಆಕ್ಟ್ 1978’ ಸಿನಿಮಾದ ಪ್ರಮೋಷನ್‍ಗಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಸಿಟಿ ಸೆಂಟರ್ ಮಾಲ್‍ನ ಭಾರತ್ ಸಿನಿಮಾಸ್‍ನಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಸಲಾಗಿತ್ತು ಎಂದು ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ಪ್ರತಿ ಭಾರಿ ಶಿವಮೊಗಕ್ಕೆ ಬಂದಾಗಲೂ ಇಲ್ಲಿಯ ರಂಗ ತಂಡಗಳು, ರಂಗ ಕರ್ಮಿಗಳನ್ನು ಭೇಟಿಯಾಗಲು ಇಷ್ಟಪಡುತ್ತಿದ್ದರು.
ಕೊನೆಯ ಫೋನ್ ಕರೆ
ಸಂಚಾರಿ ವಿಜಯ್ ಅವರಿಗೆ ಸಾಹಿತ್ಯ ಪ್ರೇಮಿ. ಇತ್ತೀಚಗೆ ಆತ್ಮಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಪ್ರಾಜೆಕ್ಟ್ ಒಂದಕ್ಕಾಗಿ ಆತ್ಮಚರಿತ್ರೆಗಳನ್ನು ಓದುತ್ತಿದ್ದರು. ಕಳೆದ ಶುಕ್ರವಾರ ಕೊನೆಯ ಬಾರಿಗೆ ಕರೆ ಮಾಡಿದ್ದ ಸಂಚಾರಿ ವಿಜಯ್ ಅವರು, ಒಂದೊಳ್ಳೆ ಆಟೋಬಯೋಗ್ರಫಿಯನ್ನು ರೆಫರ್ ಮಾಡುವಂತೆ ಕೇಳಿದ್ದರು ಅನ್ನುತ್ತಾರೆ ಶಂಕರ್ ಮಿತ್ರ.
ಶಿವಮೊಗ್ಗದ ಜೊತೆ, ಇಲ್ಲಿಯ ರಂಗಕರ್ಮಿಗಳು ಸೇರಿದಂತೆ ಹಲವರ ಜೊತೆ ಉತ್ತಮ ನಂಟು ಹೊಂದಿದ್ದರು. ಈಗ ಅವರ ಅಕಾಲಿಕ ಮರಣ ಸ್ನೇಹಿತರ ಬಳಗಕ್ಕೆ ನೋವನ್ನುಂಟು ಮಾಡಿದೆ.
ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಭದ್ರಾವತಿಯಲ್ಲಿ ನಟ ಸಂಚಾರಿ ವಿಜಯ್ ಅವರಿಗೆ ಮೊದಲ ನಾಗರಿಕ ಸನ್ಮಾನ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]