ಶಿವಮೊಗ್ಗ: ರಾಜ್ಯಾದ್ಯಂತ ಬೇಸಿಗೆಯ ತಾಪಮಾನವು ದಾಖಲೆ ಮಟ್ಟದಲ್ಲಿ ಏರಿಕೆ ಆಗಿದೆ. ಉಷ್ಣಾಂಶವು 40 ರಿಂದ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತಿದೆ. ಇದು ಆತಂಕಕಾರಿ ವಿಷಯವಾಗಿದೆ. ಇದರಿಂದ ಜನಸಾಮಾನ್ಯರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಆದ್ದರಿಂದ ಮನೆಗೊಂದು ಮರ ಎಂಬ ಕಡ್ಡಾಯ ಹಸಿರು ನೀತಿಯನ್ನು (planting trees) ಜಾರಿಗೆ ತರಬೇಕು ಎಂದು ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಸಮಿತಿ ಸದ್ಯಸರು, ರಾಜ್ಯದಲ್ಲಿ ಹೊಸದಾಗಿ ನಿರ್ಮಿಸುವ ಪ್ರತಿ ಮನೆಯ ಆವರಣದಲ್ಲಿ ಕನಿಷ್ಠ ಒಂದು ಮರ ಬೆಳೆಸುವುದನ್ನು ಸರ್ಕಾರವು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಬೇಕು. ನಗರ ಪ್ರದೇಶಗಳಲ್ಲಿ ಮನೆ ಕಟ್ಟಲು ಅನುಮತಿ ನೀಡುವಾಗಲೇ ಒಂದು ಗಿಡ ನೆಟ್ಟು ಬೆಳೆಸುವ ಷರತ್ತು ವಿಧಿಸಬೇಕು. ಮರ ಬೆಳೆಸಿರುವುದು ಖಚಿತವಾದ ನಂತರವೇ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ನೀಡುವ ನಿಯಮ ಜಾರಿಗೆ ತರಬೇಕು ಎಂದರು.


ಯಾರು ತಮ್ಮ ಮನೆಯ ಮುಂದೆ ಅಥವಾ ಆವರಣದಲ್ಲಿ ಗಿಡಗಳನ್ನು ಬೆಳೆಸುತ್ತಾರೋ ಅಂತಹವರಿಗೆ ಪ್ರೋತ್ಸಾಹ ಧನವಾಗಿ ಆಸ್ತಿ ತೆರಿಗೆಯಲ್ಲಿ ಶೇ.2 ರಿಂದ 5 ರಷ್ಟು ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎನ್.ಎಂ. ಸಿಗ್ಬತುಲ್ಲಾ ಸೇರಿದಂತೆ ಪ್ರಮುಖರು ಇದ್ದರು.