
ಶಿವಮೊಗ್ಗ: ಮಹಿಳೆಯೊಬ್ಬರ ಖಾಸಗಿ ವಿಡಿಯೋವನ್ನು ಫೇಸ್‌ಬುಕ್ ಖಾತೆಯೊಂದರಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರು (Cyber Crime police) ಬಂಧಿಸಿದ್ದಾರೆ.
ಫೆಬ್ರವರಿ 5ರಂದು ಮಹಿಳೆಯೊಬ್ಬರು ಈ ಸಂಬಂಧ ದೂರು ನೀಡಿದ್ದರು. ತಮ್ಮ ಖಾಸಗಿ ವಿಡಿಯೋವನ್ನು ಫೇಸ್‌ಬುಕ್ ಖಾತೆಯೊಂದರಲ್ಲಿ ಅಪ್‌ಲೋಡ್ ಮಾಡಿ ಮಾನಹಾನಿ ಮಾಡುತ್ತಿದ್ದಾರೆ ಎಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಐಟಿ ಕಾಯ್ದೆಯ ಕಲಂ 67, 67 (A) ಅಡಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಸಿ.ಇ.ಎನ್ ಪೊಲೀಸರು ಹೊಸನಗರ ತಾಲೂಕಿನ ಸೀಮ ಜೂಲಿಯನ್ ಸೆರಾವೋ (45), ಬೆಂಗಳೂರಿನ ದಾಸನಪುರ ಸಿ.ಜೆ.ನಿಶಾಂತ್ (29) ಎಂಬುವವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ನಿಖಿಲ್ ಬಿ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಸಿ.ಇ.ಎನ್ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ್ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದೆ.
ಇದನ್ನೂ ಓದಿ – ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ
ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತಹ ಫೋಟೋ, ವಿಡಿಯೋ ಅಥವಾ ಸಾಹಿತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.


About The Editor
ನಿತಿನ್ ಆರ್.ಕೈದೊಟ್ಲು






