ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ರಾಜೀವ್ ಗಾಂಧಿ ಬಡಾವಣೆಯ ಕಂಟ್ರಿ ಕ್ಲಬ್ (Country Club) ರಸ್ತೆಯಲ್ಲಿ ಖಚಿತ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಶೋಕ ಪಿ. (28) ಮತ್ತು ರಾಕೇಶ್ (20) ಬಂಧಿತ ಆರೋಪಿಗಳು. ಶಿವಮೊಗ್ಗ ಡಿವೈಎಸ್‌ಪಿ ಬಾಬು ಆಂಜನಪ್ಪ ಅವರು ಗಸ್ತು ಕರ್ತವ್ಯದಲ್ಲಿದ್ದಾಗ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ. ಆರೋಪಿಗಳು ಮಹಾವೀರ ಗೋಶಾಲೆ ಬಳಿ ಗ್ರೇ ಬಣ್ಣದ ನಿಸಾನ್ ಸನ್ನಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು.


ಪೊಲೀಸರ ವಾಹನವನ್ನು ಕಂಡ ಆರೋಪಿಗಳು ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದರು. ಬೆನ್ನಟ್ಟಿದ ಪೊಲೀಸರು ಅವರನ್ನು ಅಡ್ಡಗಟ್ಟಿ ವಶಕ್ಕೆ ಪಡೆದರು. ಕಾರಿನ ಡಿಕ್ಕಿಯನ್ನು ಪರಿಶೀಲಿಸಿದಾಗ ಬಿಳಿ ಚೀಲದಲ್ಲಿ ಸುಮಾರು 1,067 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ಒಂದು ಲಕ್ಷ ಎಂದು ಅಂದಾಜಿಸಲಾಗಿದೆ. ಗಾಂಜಾ ಪ್ಯಾಕ್ ಮಾಡಲು ಇಟ್ಟುಕೊಂಡಿದ್ದ 18 ಸಣ್ಣ ಜಿಪ್ ಲಾಕ್ ಕವರ್‌ಗಳು, ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ₹3,290 ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಇಂದಿರಾ ಕ್ಯಾಂಟೀನ್ ಬಳಿ ಇಬ್ಬರು ಅರೆಸ್ಟ್
