ಶಿವಮೊಗ್ಗ: ಸಾಗರ ತಾಲೂಕಿನ ಬೇಸೂರು (Besur) ಗ್ರಾಮದಲ್ಲಿ ಪರಮಾಣು ವಿದ್ಯುತ್ ಸ್ಥಾವರ (nuclear power plant) ಸ್ಥಾಪನೆಯಾಗಲಿದೆ ಎಂಬ ವದಂತಿಗಳನ್ನು ಜಿಲ್ಲಾಧಿಕಾರಿ ಹೇಮಂತ್.ಎನ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಈ ಕುರಿತು ವಾರ್ತಾ ಇಲಾಖೆ ಮೂಲಕ ಪ್ರಕಟಣೆ ನೀಡಿರುವ ಹೇಮಂತ್.ಎನ್ ಅವರು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಎನ್‌ಟಿಪಿಸಿ ಸಂಸ್ಥೆಯು ಬೇಸೂರಿನಲ್ಲಿ ಜಮೀನು ಗುರುತಿಸಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ಡಿಸಿ ಏನೆಲ್ಲ ಹೇಳಿದ್ದಾರೆ? ಇಲ್ಲಿದೆ ಪಾಯಿಂಟ್ಸ್
- ಬೇಸೂರಿನಲ್ಲಿ ಪರಮಾಣು ಸ್ಥಾವರ ಸ್ಥಾಪನೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ.
- ಜಮೀನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಕೇವಲ ವದಂತಿ.
- ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳಿಗೆ ಕಿವಿಗೊಡದಂತೆ ಮನವಿ.
- ಸಾರ್ವಜನಿಕರು ಭಯಭೀತರಾಗುವ ಅಗತ್ಯವಿಲ್ಲ ಎಂದು ಡಿಸಿ ಭರವಸೆ.
“ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಲಾಗಿಲ್ಲ. ಜಮೀನು ಗುರುತಿಸುವಿಕೆ ಅಥವಾ ಸ್ಥಾವರ ಸ್ಥಾಪನೆಯ ಕ್ರಮಗಳು ನಡೆಯುತ್ತಿವೆ ಎಂಬುದು ಕೇವಲ ವದಂತಿಯಷ್ಟೆ.”
– ಹೇಮಂತ್ ಎನ್., ಜಿಲ್ಲಾಧಿಕಾರಿ.
ಸ್ಥಳೀಯ ಪರಿಸರ ಮತ್ತು ಜನರ ಹಿತದೃಷ್ಟಿಯಿಂದ ಇಂತಹ ಯಾವುದೇ ಯೋಜನೆಗಳ ಚರ್ಚೆ ಜಿಲ್ಲಾಡಳಿತದ ಮಟ್ಟದಲ್ಲಿ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಕುವೆಂಪು ವಿವಿ: ಮೂವರಿಗೆ ಗೌರವ ಡಾಕ್ಟರ್, ರಾಜ್ಯಪಾಲರ ಅನುಮೋದನೆ, ಹೆಸರು ಘೋಷಣೆ
Is a nuclear power plant being set up in Besur, Sagara? Check the official clarification from Shivamogga DC Hemant N regarding these viral rumors.







