ಶಿವಮೊಗ್ಗ: ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಅವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಪಿ.ಲಂಕೇಶ್ ವಾರ್ಷಿಕ ಪ್ರಶಸ್ತಿ (Award) ನೀಡಲಾಯಿತು. ಜಿಲ್ಲಾ ಸರಕಾರಿ ನೌಕರರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಿ.ಮಹಾದೇವಪ್ಪ ಏನೆಲ್ಲ ಮಾತನಾಡಿದರು?
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಿ.ಮಹಾದೇವಪ್ಪ ಅವರು, ಪತ್ರಕರ್ತರು ಅಧ್ಯಯನಶೀಲರಾಗಿದ್ದರೆ ಮಾತ್ರ ಪತ್ರಿಕೋದ್ಯಮದಲ್ಲಿ ಹೊಸತನ ರೂಢಿಸಿಕೊಳ್ಳಲು ಸಾಧ್ಯ. ಪತ್ರಕರ್ತ ಉತ್ತಮ ಬರವಣಿಗೆ ರೂಢಿಸಿಕೊಳ್ಳಬೇಕೆಂದರೆ ಕೇವಲ ಸುದ್ದಿ ಬರೆದರೆ ಸಾಕಾಗುವುದಿಲ್ಲ. ನಿರಂತರ ಅಧ್ಯಯನ ಶೀಲರಾಗಿರಬೇಕು.
ಇದನ್ನೂ ಓದಿ : ಶಿವಮೊಗ್ಗ ಸಿಟಿಯಲ್ಲಿ ಜಪಾನ್ ಮಾದರಿ ಫುಟ್ ಓವರ್ ಬ್ರಿಡ್ಜ್, ಎಲ್ಲೆಲ್ಲಿ ಸ್ಥಾಪಿಸುವ ಯೋಚನೆ ಇದೆ?
ಪ್ರಮುಖ ಸಮಾವೇಶಗಳು, ಗೋಷ್ಠಿ ಗಳಿಗೆ ತೆರಳುವ ಮುನ್ನ ಪತ್ರಕರ್ತರು ಸಿದ್ಧತೆ ಕೈಗೊಳ್ಳಬೇಕು. ಸ್ವತಃ ಅನುಭವಿಸಿ ಬರೆದ ವರದಿಗಳು ಓದುಗರಿಗೆ ಹೆಚ್ಚು ಆಪ್ತವಾಗುತ್ತವೆ. ಪತ್ರಿಕೆಗಳಿಗೆ ವರದಿಗಾರರು ದೊಡ್ಡ ಶಕ್ತಿ. ಆದರೆ ವರದಿಗಾರರ ಬರವಣಿಗೆಗೆ ಡೆಸ್ಕ್ ನವರು ಮತ್ತಷ್ಟು ಹೊಳಪು, ಹೊಳಹುಗಳನ್ನು ನೀಡಿದಾಗ ಓದುಗರಿಗೆ ಹೆಚ್ಚು ಆಪ್ತವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಮತ್ತು ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬಿ. ವೆಂಕಟಸಿಂಗ್, ಪತ್ರಕರ್ತರು ನಿರಂತರ ಅಪ್‌ಡೇಟ್ ಆಗದೆ ಹೋದಲ್ಲಿ ಔಟ್‌ಡೇಟ್ ಆಗುತ್ತೇವೆ. ಲಂಕೇಶ್ ಅವರು ತನಿಖಾ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದರು. ಪತ್ರಿಕೆ ಜನಮುಖಿ ಮತ್ತು ಸಂವಿಧಾನದ ಆಶಯ ದೊಂದಿಗೆ ಕೆಲಸ ಮಾಡಿದರೆ ಸರ್ಕಾರವನ್ನೆ ಬದಲಿಸಬಹುದು. ಪತ್ರಕರ್ತ ಸಮಾಜ ಮುಖಿಯಾಗಿ ನಿಂತರೆ ಎಷ್ಟು ಸಾಧನೆ ಮಾಡಬಹುದು ಎಂಬುದಕ್ಕೆ ಲಂಕೇಶ್ ಮತ್ತು ಅವರ ಪತ್ರಿಕೆ ಅತ್ಯುತ್ತಮ ಉದಾಹರಣೆ. ವಿವಿಧ ಕಾರಣಗಳಿಂದಾಗಿ ತನಿಖಾ ಪತ್ರಿಕೋದ್ಯಮವು ಮರೆಯಾ ಗುತ್ತಿದೆ. ಪತ್ರಕರ್ತರು ಮಾಹಿತಿ ಹಕ್ಕು ಕಾಯಿದೆಯನ್ನು ಸಮರ್ಥವಾಗಿ ಬಳಸಿಕೊಂಡು ತನಿಖಾ ವರದಿಗಳಿಗೆ ಆದ್ಯತೆ ನೀಡಬಹುದು ಎಂದರು.

ಪಿ.ಲಂಕೇಶ್ ಪ್ರಶಸ್ತಿ ಪ್ರದಾನ ಮಾಡಿದ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ, ಸಮಾಜದಲ್ಲಿ ವಿಮರ್ಶಾತ್ಮಕ ನಿರ್ಧಾರ ಕೈಗೊಳ್ಳುವಂತಹ ವಾತಾವರಣವನ್ನು ಪತ್ರಿಕೋದ್ಯಮ ಸೃಷ್ಟಿ ಮಾಡಿದಾಗ ಸರ್ಕಾರದಿಂದ ಧನಾತ್ಮಕ ನಿರ್ಧಾರಗಳು ಹೊರ ಬರುತ್ತವೆ. ವಿವಿಧ ಸಂಗತಿಗಳನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಒಳಪಡಿಸಿ ಸರ್ಕಾರದ ಮೇಲೆ ಪ್ರಭಾವ ಬೀರಿ ಆ ಮೂಲಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತಹ ಕೆಲಸವನ್ನು ಪತ್ರಿಕೋದ್ಯಮ ಮಾಡಬೇಕು ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯು.ಹೆಚ್. ವೈದ್ಯನಾಥ, ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ ನೇರಿಗೆ ಹಾಜರಿದ್ದರು.

About The Editor
ನಿತಿನ್ ಆರ್.ಕೈದೊಟ್ಲು






