ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 13 ಮಾರ್ಚ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಕ್ಕಳು ಎಂಜಿನಿಯರ್, ಡಾಕ್ಟರ್ ಆಗಬೇಕು. ಕೈ ತುಂಬ ಸಂಬಳ ಪಡೆಯುವ ಕೆಲಸಕ್ಕೆ ಸೇರಬೇಕು ಅಂತಾ ಯೋಚಿಸುವ ಪೋಷಕರು..! ಪ್ರತಿ ತಿಂಗಳು ಲಕ್ಷ ಲಕ್ಷ ಸಂಪಾದಿಸಬೇಕು ಅಂತಾ ಕನಸು ಕಾಣುವ ಯುವ ಸಮೂಹ..!
ಶಿಕ್ಷಣ ಮುಗಿಯುತ್ತಿದ್ದಂತೆ ಕೆಲವರನ್ನು ಹೊರತು ಎಲ್ಲ ಪದವೀಧರರಿಗೂ ಉದ್ಯೋಗ ಸಿಗುತ್ತಿಲ್ಲ. ಹಾಗಾಗಿ ಕೈ ತುಂಬ ಸಂಬಳದ ಕನಸು ಕನಸಾಗಿಯೇ ಉಳಿದು ಹೋಗುತ್ತಿದೆ. ಆದರೆ ಈ ಕನಸು ನನಸು ಮಾಡಿಕೊಳ್ಳಲು ಮಾರ್ಗವಿದೆ ಅಂತಾ ವಿದ್ಯಾರ್ಥಿಗಳಿಗೆ ಕೃಷಿ ಇಲಾಖೆ ಮನವರಿಕೆ ಮಾಡುತ್ತಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗ ಕೃಷಿ ಇಲಾಖೆ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿದೆ. ಅಧಿಕಾರಿಗಳೇ ಸ್ವಯಂ ಪ್ರೇರಿತವಾಗಿ ಈ ಪ್ರಯೋಗ ಮಾಡುತ್ತಿದ್ದಾರೆ. ಹಾಗಾಗಿ, ಈಗ ಹಲವು ವಿದ್ಯಾರ್ಥಿಗಳಲ್ಲಿ ಸ್ವಾವಲಂಬಿ ಬದುಕಿನ ಭರವಸೆ ಮೂಡಿದೆ.
ಕೃಷಿ ಇಲಾಖೆಯ ವಿಭಿನ್ನ ಪ್ರಯೋಗ ಏನು?
ಕೃಷಿಯೊಂದು ನಷ್ಟದ ಉದ್ಯಮ, ವಿದ್ಯಾವಂತರು ಮಾಡುವ ಕೆಲಸವಲ್ಲ ಎಂಬ ಭಾವನೆ ಯುವಪೀಳಿಗೆಯಲ್ಲಿದೆ. ಅದನ್ನು ಹೋಗಲಾಡಿಸಿ ಕೃಷಿ ಕಡೆಗೆ ಸೆಳೆಯುವುದೆ ಕೃಷಿ ಇಲಾಖೆಯ ಪ್ರಯೋಗ. ಪದವಿ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮಾಡಲಾಗುತ್ತಿದೆ. ಆತ್ಮ ಯೋಜನೆ ಅಡಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಗರದಲ್ಲಿ ಏನೇನೆಲ್ಲ ಹೇಳುತ್ತಾರೆ?
ಈ ಕಾರ್ಯಾಗಾರ ಪಿಪಿಟಿ ಮತ್ತು ಭಾಷಣಕ್ಕೆ ಸೀಮಿತವಲ್ಲ. ಕೃಷಿ ಲಾಭದಾಯಕ ಉದ್ಯಮ ಎಂಬುದನ್ನು ಉದಾಹರಣೆ ಸಹಿತ ಮಾಹಿತಿ ನೀಡಲಾಗುತ್ತದೆ. ಆರಂಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದವರ ವಿವರ ಇರುವ ಪತ್ರಿಕಾ ವರದಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ. ಬಳಿಕ ತೋಟಗಾರಿಕೆ, ಪಶುಪಾಲನೆ, ಪುಷ್ಪೋದ್ಯಮ, ಕೃಷಿ, ಕುಕ್ಕಟೋದ್ಯಮ, ಅಣಬೆ ಬೇಸಾಯ, ಜೇನು ಬೇಸಾಯ, ಅಡಕೆ ಸಿಪ್ಪೆ ಉಪ ಉತ್ಪನ್ನ ತಯಾರಿಕೆ, ಬಾಳೆ ಬೆಳೆಯುವುದು ವಿನೂತನ ವಿಧಾನ ಇಂತಹ ನಾನಾ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತಿದೆ.
ಸಮೀಪದ ಪ್ರಗತಿಪರ ರೈತರು ಇರ್ತಾರೆ
ಕಾರ್ಯಾಗಾರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಷ್ಟೆ ಅಲ್ಲ, ಕಾಲೇಜಿನ ಸಮೀಪದ ಪ್ರಗತಿಪರ ರೈತರೊಬ್ಬರು ಇರುತ್ತಾರೆ. ಅವರು ತಮ್ಮ ಅನುಭವವನ್ನು ಹಂಚಿಕೊಂಡು, ವಿದ್ಯಾರ್ಥಿಗಳಿಗೆ ಇರುವ ಗೊಂದಲ ನಿವಾರಿಸುತ್ತಾರೆ. ತಮ್ಮೂರಿನ ಸಮೀಪದ ಕೃಷಿಕರೊಬ್ಬರು ಕೃಷಿಯಲ್ಲಿ ಲಾಭ ಪಡೆಯುತ್ತಿದ್ದಾರೆ ಅನ್ನುವುದು ತಿಳಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೇರಣೆಯಾಗಲಿದೆ ಅನ್ನುವುದು ಇದರ ಉದ್ದೇಶ.
ಕಾರ್ಯಾಗಾರಕ್ಕೆ ಭಾರೀ ಡಿಮಾಂಡ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಕಾರ್ಯಾಗರ ನಡೆಸಲಾಗುತ್ತಿದೆ. 2019ರ ಸೆಪ್ಟೆಂಬರ್’ನಿಂದ ಕಾರ್ಯಾಗಾರ ಅರಂಭವಾಗಿದ್ದು, ಈಗಾಗಲೇ ಏಳು ಕಾಲೇಜುಗಳಲ್ಲಿ ನಡೆದಿದೆ. ಪ್ರತಿ ಕಾರ್ಯಾಗಾರದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕಾರ್ಯಾಗಾರದ ಬಳಿಕ ಹಲವು ವಿದ್ಯಾರ್ಥಿಗಳು ಕೃಷಿ ಕಡೆಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಕಾರ್ಯಾಗಾರಕ್ಕೆ ಡಿಮಾಂಡ್ ಬಂದಿದೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕೃಷಿ ಕ್ಷೇತ್ರದಲ್ಲಿ ಲಭ್ಯ ಇರುವ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಆತ್ಮ ಯೋಜನೆ ಅಡಿಯಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಏರ್ಪಡಿಸಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅನ್ನುತ್ತಾರೆ ಕೃಷಿ ಇಲಾಖೆ ಉಪ ನಿರ್ದೇಶಕ ಕೆ.ಹೆಚ್.ಪಾಂಡು.
ಶಿವಮೊಗ್ಗ ಕೃಷಿ ಇಲಾಖೆಯ ಈ ಪ್ರಯೋಗ, ಉಳಿದ ಜಿಲ್ಲೆಗೂ ವಿಸ್ತರಿಸಬೇಕಿದೆ. ಇದರಿಂದ ಕೃಷಿ ಕಡೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಬೆಳಯಲಿದೆ. ಯುವ ಸಮೂಹ ಕೃಷಿಯಲ್ಲಿ ತೊಡಗಿಸಿಕೊಳ್ಳುವುದರಿಂದ, ವಿಭಿನ್ನ ಪ್ರಯೋಗಗಳು ನಡೆಯಲಿದೆ. ಅಲ್ಲದೆ ಕೃಷಿಗೆ ಹೊಳ ಕಳೆ ಬರಲಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]