ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಅತಿ ವಿರಳ ‘ಬಾಂಬೆ ಬ್ಲಡ್ ಗ್ರೂಪ್’ ಹೊಂದಿದ್ದ ಹಾಗೂ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಶಸ್ತ್ರಚಿಕಿತ್ಸೆ (ರಪ್ಚರಡ್ ಎಕ್ಟೋಪಿಕ್) ಮಾಡಿ ಮೆಗ್ಗಾನ್ ಆಸ್ಪತ್ರೆ ವೈದ್ಯರು ಅವರ ಜೀವ ಉಳಿಸಿದ್ದಾರೆ.
ಗರ್ಭನಾಳದಲ್ಲಿ ಗರ್ಭ ಧರಿಸಿದ್ದರು
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹಳೆ ಜೋಗದ ವೀರಭದ್ರಪ್ಪ ಅವರ ಪತ್ನಿ ಬೇಬಿ (31) ನವೆಂಬರ್ 12ರಂದು ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದರು. ತುರ್ತು ಚಿಕಿತ್ಸೆ ವಿಭಾಗಕ್ಕೆ ದಾಖಲಾಗಿದ್ದರು. ಪರೀಕ್ಷಿಸಿದಾಗ ಅವರು ಒಂದೂವರೆ ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿತ್ತು. ಅವರು ಗರ್ಭಕೋಶದ ಬದಲು ಗರ್ಭನಾಳದಲ್ಲಿ ಗರ್ಭ ಧರಿಸಿರುವುದು (ಎಕ್ಟೋಪಿಕ್ ಪ್ರೆಗ್ನೆನ್ಸಿ) ಈ ವೇಳೆ ತಿಳಿದು ಬಂದಿತ್ತು.
ಆಸ್ಪತ್ರೆಗೆ ಬಂದಾಗ ತೀವ್ರ ಆಘಾತಕ್ಕೊಳಗಾಗಿದ್ದ ಬೇಬಿ ಅವರ ರಕ್ತ ತಪಾಸಣೆ ಮತ್ತು ಇತರೆ ಪರೀಕ್ಷೆ ನಡೆಸಲಾಯಿತು. ಹಿಮೋಗ್ಲೊಬಿನ್ ಪ್ರಮಾಣ 2.5 ಗ್ರಾಂ ಮತ್ತು ಬಿಪಿ 80/50 ಇತ್ತು. ಉಸಿರಾಟದ ತೊಂದರೆಯಿಂದ ಅರೆಪ್ರಜ್ಞಾವಸ್ಥೆಗೆ ಜಾರಿದ್ದರು. ಸ್ಕ್ಯಾನಿಂಗ್‍ನಲ್ಲಿ ಗರ್ಭನಾಳದಲ್ಲಿ ಧರಿಸಿರುವ ಗರ್ಭವು ತುಂಡಾಗಿರುವುದು (ರಪ್ಚರಡ್ ಎಕ್ಟೋಪಿಕ್) ಕಂಡುಬಂದಿತ್ತು. ತಕ್ಷಣ ಅವರನ್ನು ಪ್ರಸೂತಿ ಐಸಿಯು ವಿಭಾಗಕ್ಕೆ ಸ್ಥಳಾಂತರಿಸಿ ಅವರ ರಕ್ತ ಪರೀಕ್ಷಿಸಿದಾಗ ಪ್ರಪಂಚದಲ್ಲೇ ಅತಿ ವಿರಳವಾದ, ‘ಬಾಂಬೆ ಬ್ಲಡ್ ಗ್ರೂಪ್’ ಇರುವುದು ಗೊತ್ತಾಗಿತ್ತು. ಅವರಿಗೆ ಅತಿ ಅವಶ್ಯಕವಾಗಿ 4 ರಿಂದ 5 ಯೂನಿಟ್‍ಗಳಷ್ಟು ರಕ್ತದ ಅವಶ್ಯಕತೆ ಇತ್ತು. ರಕ್ತ ಸಿಗದಿದ್ದರೆ ಗೃಹಿಣಿ ತೊಂದರೆಗೆ ಒಳಗಾಗುವ ಸಂಭವವಿತ್ತು.
ಇದನ್ನೂ ಓದಿ- ಶಿವಮೊಗ್ಗ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಗೊತ್ತಿರಬೇಕಾದ 2 ಸಂಗತಿ | ನಮ್ಮೂರು ಶಿವಮೊಗ್ಗ
ರಕ್ತಕ್ಕಾಗಿ ಸತತ 6 ಗಂಟೆ ಪ್ರಯತ್ನ
ಆ ಸಮಯದಲ್ಲಿ ಡಾ.ಲೇಪಾಕ್ಷಿ ಬಿ.ಜಿ ಮತ್ತು ಡಾ.ಅಶ್ವಿನಿ ವೀರೇಶ್ ತಂಡ ಸತತ ಪ್ರಯತ್ನ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಿದ್ದನಗೌಡ ಪಿ ಅವರ ಮಾರ್ಗದರ್ಶನದಲ್ಲಿ ಈ ಅತೀ ವಿರಳ ರಕ್ತದ ಗುಂಪಿನ ದಾನಿಗಳನ್ನು ಸತತ 6 ಗಂಟೆಗಳ ಪ್ರಯತ್ನದಿಂದ ಹುಡುಕಿ, ರಕ್ತ ಸಂಗ್ರಹಿಸಿ ಅವರಿಗೆ ನೀಡಿದ್ದರು.
ರಕ್ತನಿಧಿ ಕೇಂದ್ರದ ವೈದ್ಯರ ಶ್ರಮ
ರಕ್ತನಿಧಿ ಕೇಂದ್ರದ ವೈದ್ಯೆ ಡಾ.ವೀಣಾ ಮತ್ತು ತಂಡ ಕೂಡ ಶ್ರಮಪಟ್ಟು ವಿಜಯನಗರ ಜಿಲ್ಲೆಯ ಕೊಟ್ಟೂರಿನ ಸಿದ್ದೇಶ್, ದಾವಣಗೆರೆ ಜಿಲ್ಲೆಯ ಮಾಯಕೊಂಡದ ಜಿ.ಪ್ರವೀಣ್ ಹಾಗೂ ಬೆಂಗಳೂರಿನ ಸಂಕಲ್ಪ ಫೌಂಡೇಶನ್ ಸಹಾಯದಿಂದ ರಕ್ತ ಸಂಗ್ರಹಿಸಿತ್ತು.
3 ಗಂಟೆಯ ಶಸ್ತ್ರಚಿಕಿತ್ಸೆ
ಅರಿವಳಿಕೆ ತಜ್ಞ ಡಾ.ಪಿ.ಟಿ. ಶಿವಾನಂದ ತಂಡದ ನೆರವು ಪಡೆದು ಯಶಸ್ವಿ 3 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯೊಳಗೆ ಸಂಗ್ರಹವಾಗಿದ್ದ ಸುಮಾರು 2.5 ಲೀ.ನಷ್ಟು ರಕ್ತವನ್ನು ಹೊರತೆಗೆದು ಬೇಬಿ ಅವರ ಜೀವ ಉಳಿಸಲಾಗಿದೆ.