ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020
ಬುಲೆಟ್ ಬೈಕ್ ಸೌಂಡ್ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಕಾಲಿಗೆ ಗುಂಡು ಹಾರಿಸಿ, ಬಳಿಕ ಅಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಪರಾರಿಯಾಗಿದ್ದ ಕುಣಜೆ ಮಂಜುನಾಥಗೌಡನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಸಂಬಂಧಿಯೊಬ್ಬರ ಮನೆಯಲ್ಲಿ ಈತ ಅಡಗಿಕೊಂಡಿದ್ದ ಎಂದು ತಿಳಿದು ಬಂದಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಂಜುನಾಥಗೌಡ ಸಿಕ್ಕಿ ಬಿದ್ದಿದ್ದು ಹೇಗೆ? ಎಲ್ಲಿ?
ಗಲಾಟೆ ವೇಳೆ ಗಾಯಗೊಂಡಿದ್ದ ಕುಣಜೆ ಮಂಜುನಾಥಗೌಡ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಪರಾರಿಯಾಗಿದ್ದ ಈತ ಶೃಂಗೇರಿಯಲ್ಲಿರುವ ತಮ್ಮ ಸಂಬಂಧಿಯೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದ ಎಂದು ತಿಳಿದು ಬಂದಿದೆ.
ಪತ್ತೆಗೆ ಪೊಲೀಸ್ ಟೀಂ
ಮಂಜುನಾಥಗೌಡ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ವಿಶೇಷ ತಂಡ ರಚಿಸಿದ್ದರು. ಮಹಿಳಾ ಠಾಣೆ ಇನ್ಸ್‍ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ರೌಡಿ ನಿಗ್ರಹ ದಳದ ಸಿಬ್ಬಂದಿಗಳಾದ ಮರ್ದನ್, ಅಶೋಕ್, ಕಿರಣ್, ಸಂದೀಪ್, SP ಕಛೇರಿಯ ANC ವಿಭಾಗದ ಇಂದ್ರೇಶ್ ಮತ್ತು ವಿಜಯ್ ಈ ಟೀಂನಲ್ಲಿದ್ದರು. ಶೋಧ ಕಾರ್ಯ ನಡೆಸಿದ ಈ ತಂಡ ಕುಣಜೆ ಮಂಜುನಾಥಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಕೇಸ್? ಮಂಜುನಾಥಗೌಡ ಎಸ್ಕೇಪ್ ಆಗಿದ್ದೇಕೆ?
ಮನೆ ಮುಂದೆ ಹೋಗಿದ್ದ ಬುಲೆಟ್ ಬೈಕ್‍ನ ಶಬ್ದದ ವಿಚಾರವಾಗಿ ಮಂಜುನಾಥಗೌಡ ಮತ್ತು ಇತರರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಮಂಜುನಾಥಗೌಡ ಅವರು ಬಂದೂಕಿನಿಂದ ಹಾರಿಸಿದ ಗುಂಡು ರಾಮಚಂದ್ರಗೌಡ ಅವರ ತೊಡೆಗೆ ತಗುಲಿತ್ತು.
ದೂರು, ಪ್ರತಿದೂರು ಮತ್ತು ಎಸ್ಕೇಪ್
ಘಟನೆ ಸಂಬಂಧ ತೀರ್ಥಹಳ್ಳಿಯ ಮಾಳೂರು ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಎರಡು ಎಫ್‍ಐಆರ್ ಕೂಡ ಸಿದ್ಧವಾಗಿವೆ.
ರಾಮಚಂದ್ರಗೌಡ ಅವರು ನೀಡಿರುವ ದೂರಿನಲ್ಲಿ, ಹಣಗೆರೆಕಟ್ಟೆಯ ಹಬೀಬ್ ಉಲ್ಲಾ ಅಲಿಯಾಸ್ ಮುನ್ನ ಅವರ ತೋಟಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿಸಲಾಗಿದೆ. ತಮ್ಮ ಮಕ್ಕಳಾದ ರಕ್ಷಿತ್, ರಜತ್, ಮಕ್ಕಳ ಸ್ನೇಹಿತರಾದ ಧನರಾಜ್, ಅಜೀತ್ ಅವರೊಂದಿಗೆ ಮೂರು ಬೈಕ್‍ನಲ್ಲಿ ತೋಟಕ್ಕೆ ತೆರಳುತ್ತಿದ್ದೆವು. ಈ ವೇಳೆ ರಸ್ತೆ ಪಕ್ಕದ ಮೋರಿ ಕಟ್ಟೆ ಮೇಲೆ ಬಂದೂಕು ಹಿಡಿದು ಕುಳಿತಿದ್ದ ಮಂಜುನಾಥಗೌಡ, ತಮ್ಮ ಬೈಕ್‍ಗಳು ಸಮೀಪಕ್ಕೆ ಬರುತ್ತಿದ್ದಂತೆ ತಮಗೆ ಬೈಕ್ ಶಬ್ದ ಆಗಿಬರುವುದಿಲ್ಲ ಎಂದು ಆರೋಪಿಸಿ ಗುಂಡು ಹಾರಿಸಿದ್ದಾರೆ. ಇವರಿಗೆ ಕೊಲೆ ಮಾಡುವ ಉದ್ದೇಶವಿತ್ತು ಎಂದು ದೂರಿದ್ದಾರೆ.
ಮತ್ತೊಂದೆಡೆ ಮಂಜುನಾಥಗೌಡ ಅವರು ನೀಡಿರುವ ದೂರಿನಲ್ಲಿ, ಮೇ 26ರ ರಾತ್ರಿ 9.30ರ ಹೊತ್ತಿಗೆ ತಮ್ಮ ಮನೆ ಮುಂದಿನ ರಸ್ತೆಯಲ್ಲಿ ಮುನ್ನಾ ಅವರ ಬೈಕ್ ಭಾರೀ ಶಬ್ದ ಮಾಡುತ್ತಾ ತೆರಳಿತ್ತು. ಹಾಗಾಗಿ ಮುನ್ನಾ ಅವರಿಗೆ ಫೋನ್ ಮಾಡಿ ರಾತ್ರಿ ವೇಳೆ ಈ ರೀತಿ ಶಬ್ದ ಮಾಡಿಕೊಂಡು ಹೋಗದಂತೆ ತಿಳಿಸಲಾಯಿತು. ಬಳಿಕ ಮೂರು ಬೈಕ್‍ನಲ್ಲಿ ಬಂದ ಆರು ಮಂದಿ ತಮ್ಮ ಮನೆ ಗೇಟ್ ಒಳಗೆ ನುಗ್ಗಿ ಗಲಾಟೆಯಾಡಿ, ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆ ಬಳಿಕ ಗುಂಡು ತಗುಲಿದ್ದ ಹಿನ್ನೆಲೆ ರಾಮಚಂದ್ರಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಜುನಾಥಗೌಡ ಅವರನ್ನು ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದಲೇ ಮಂಜುನಾಥಗೌಡ ಎಸ್ಕೇಪ್ ಆಗಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]